ಶ್ರಿ ಬಸವಣ್ಣನವರ ವಚನಗಳು

(Sri Basavanna Vachanagalu)

The English translation and explanation of select Basavanna Vachanagalu is available in the Vachana Series.

೧.	ಉದಕದೊಳಗೆ ಬಚ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು,
	ಸಸಿಯೊಳಗಣ ರಸದ ರುಚಿಯಂತಿದ್ದಿತ್ತು,
	ನನೆಯೊಳಗಣ ಪರಿಮಳದಂತಿದ್ದಿತ್ತು,
	ನಿಮ್ಮ ನಿಲುವು ಕೂಡಲಸಂಗಮದೇವಾ,
	ಕನ್ಯೆಯ ಸ್ನೇಹದಂತಿದ್ದಿತ್ತು.

೨.	ಕಾಳಿಯ ಕಣ್ ಕಾಣದಿಂದ ಮುನ್ನ,
	ತ್ರಿಪುರ ಸಂಹಾರದಿಂದ ಮುನ್ನ,
	ಹರಿವಿರಂಚಿಗಳಿಂದ ಮುನ್ನ,
	ಉಮೆಯ ಕಳ್ಯಾಣದಿಂದ ಮುನ್ನ,
	ಮುನ್ನ, ಮುನ್ನ, ಮುನ್ನ,
	- ಅಂದಿಂಗೆಳೆಯ ನೀನು,
	ಹಳೆಯ ನಾನು ಮಹಾದಾನಿ ಕೂಡಲಸಂಗಮದೇವಾ.

೩.	ಅಯ್ಯಾ, ನೀನು ನಿರಾಕಾರವಾಗಿರ್ದಲ್ಲಿ ನಾನು ಜ್ನಾನವೆಂಬ ವಾಹನವಾಗಿರ್ದೆ,
	ಕಾಣಾ ಅಯ್ಯಾ, ನೀನು ನಾಟ್ಯಕ್ಕೆ ನಿಂದಲ್ಲಿ ನಾನು ಚೈತನ್ಯವೆಂಬ ವಾಹನವಾಗಿರ್ದೆ,
	ಕಾಣಾ ಅಯ್ಯಾ, ನೀನು ಆಕಾರವಾಗಿರ್ದಲ್ಲಿ ನಾನು ವೃಶ್ಹಭನೆಂಬ ವಾಹನವಾಗಿರ್ದೆ
	ಕಾಣಾ ಅಯ್ಯಾ; ನೀನೆನ್ನ ಭವದ ಕೊಂದಿಹೆನೆಂದು ಜಂಗಮ ಲಾಂಚ್ಹನನಾಗಿ
	ಬಂದಲ್ಲಿ ನಾನು ಭಕ್ತನೆಂಬ ವಾಹನವಾಗಿರ್ದೆ ಕಾಣಾ ಕೂಡಲಸಂಗಮದೇವಾ

೪.	ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದೊಡೆ ನಿಮ್ಮಾಣೆ, ನಿಮ್ಮ
	ಪ್ರಮಥರಾಣೆ! ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ, ಪ್ರಥಮ ಭವಾಂತರದಲ್ಲಿ
	ಶಿಲಾದನೆಂಬ ಗಣೇಶ್ವರನ ಮಾಡಿ ಹೆಸರಿಟ್ಟು ಕರೆದು ನಿಮ್ಮ ಭೃತ್ಯನ ಮಾಡಿಯೆನ್ನ
	ನಿರಿಸಿಕೊಂಡಿರ್ದಿರಯ್ಯಾ, ಎರಡನೆಯ ಭವಾಂತರದಲ್ಲಿ ಸ್ಕಂದನೆಂಬ ಗಣೇಶ್ವರನ
	ಮಾಡಿ ಹೆಸರಿಟ್ಟು ಕರೆದು ನಿಮ್ಮ ಕಾರುಣ್ಯವ ಮಾಡಿಸಿಕೊಂಡಿರ್ದಿರಯ್ಯಾ, 
	ಮೂರನೆಯ ಭವಾಂತರದಲ್ಲಿ ನೀಲಲೋಹಿತನೆಂಬ ಗಣೇಶ್ವರನ ಮಾಡಿ
	ಹೆಸರಿಟ್ಟು ಕರೆದು ನಿಮ್ಮ ಲೀಲಾ ವಿನೋದದಿಂದಿರಿಸಿಕೊಂಡಿರ್ದಿರಯ್ಯಾ,
	ನಾಲ್ಕನೆಯ ಭವಾಂತರದಲ್ಲಿ ಮನೋಹರನೆಂಬ ಗಣೇಶ್ವರನ ಮಾಡಿ
	ಹೆಸರಿಟ್ಟು ಕರೆದು ನಿಮ್ಮ ಮನಃ ಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ.
	ಐದನೆಯ ಭವಾಂತರದಲ್ಲಿ ಕಾಲಲೋಚನನೆಂಬ ಗಣೇಶ್ವರನ ಮಾಡಿ
	ಹೆಸರಿಟ್ಟು ಕರೆದು ಸರ್ವಕಾಲ ಸಂಹಾರವ ಮಾಡಿಸುತ್ತಿರ್ದಿರಯ್ಯಾ.
	ಆರನೆಯ ಭವಾಂತರದಲ್ಲಿ ವೃಶ್ಹಭನೆಂಬ ಗಣೇಶ್ವರನ ಮಾಡಿ
	ಹೆಸರಿಟ್ಟು ಕರೆದು ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ.
	ಏಳನೆಯ ಭವಾಂತರದಲ್ಲಿ ಬಸವನೆಂಬ ಗಣೇಶ್ವರನ ಮಾಡಿ
	ಹೆಸರಿಟ್ಟು ಕರೆದು ನಿಮ್ಮೊಕ್ಕುದಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ.
	ಇದು ಕಾರಣ ಕೂಡಲಸಂಗಮದೇವಾ, ನೀವು ಬರಿಸಿದ ಭವಾಂತರದಲ್ಲಿ ನಾನು
	ಬರುತಿರ್ದೆನಯ್ಯಾ.

೫.	ಅಯ್ಯಾ, ನಿಮ್ಮ ಶರಣನ ಮರ್ತ್ಯಕ್ಕೆ ತಂದೆಯಾಗಿ ನೆನೆನೆನೆದು
	ಸುಖಿಯಾಗಿಯಾನು ಬದುಕಿದೆನಯ್ಯಾ. ಅದೇನು ಕಾರಣ
	ತಂದೆಯಿಂದರಿದೆನಯ್ಯಾ. ಅರಿದರಿದು ನಿಮ್ಮ ಶರಣನು
	ಆಚರಿಸುವಾಚರಣೆಯ ಕಂಡು ಕಣ್ದೆರೆದೆನಯ್ಯಾ ಕೂಡಲಸಂಗಮದೇವಾ.

೬.	’ಕರಿಘನ ಅಂಕುಶ ಕಿರಿದೆ’ನ್ನಬಹುದೆ? ಬಾರದಯ್ಯಾ.
	’ಗಿರಿಘನ ವಜ್ರ ಕಿರಿದೆ’ನ್ನಬಹುದೆ? ಬಾರದಯ್ಯಾ. 
	ತಮ್ಮಂಥ ಘನ ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ಯ. 
	’ಮರಹು ಘನ ನಿಮ್ಮ ನೆನೆವ ಮನ ಕಿರಿದೆ’ನ್ನಬಹುದೆ? ಬಾರದಯ್ಯಾ
	ಕೂಡಲಸಂಗಮದೇವಾ.

೭.	ಭವಬಂಧನ ಭವಪಾಶವಾದ ಕಾರಣವೇನಯ್ಯಾ?
	ಹಿಂದಣ ಜನ್ಮದಲಿ ಲಿಂಗವ ಮರೆದೆನಾಗಿ,
	ಹಿಂದಣ ಸಿರಿಯಲ್ಲಿ ಜಂಗಮನ ಮರೆದೆನಾಗಿ
	ಅರಿದೋಡೀ ಸಂಸಾರವ ಹೊದ್ದಲೀವನೆ ಕೂಡಲಸಂಗಮದೇವಾ.

೮.	ಸಂಸಾರ ಸಾಗರನ ತೆರೆಕೊಬ್ಬಿ ಮುಖದ ಮೇಲೆ ಅಲೆಯುತ್ತಿದ್ದುದೇ ನೋಡಾ!
	ಸಂಸಾರಸಾಗರ ಉರದುದ್ದವೇ? ಹೇಳಾ! ಸಂಸಾರ ಸಾಗರ ಕೂರಲುದ್ದವೇ?
	ಹೇಳಾ? ಸಂಸಾರ ಸಾಗರ ಸಿರದುದ್ದವಾದ ಬಳಿಕ ಏನ ಹೇಳುವೆನಯ್ಯಾ?
	ಅಯ್ಯಾ, ಅಯ್ಯಾ, ಎನ್ನ ಹುಯ್ಯಲ ಕೇಳಯ್ಯ? ಕೂಡಲಸಂಗಮದೇವಾ ನಾನೇನೆನುವೆನಯ್ಯಾ?

೯.	ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ
	ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯಾ!
	ಇಂದೆನ್ನ ದೇಹಕ್ಕೆ ಗ್ರಹಣವಾಯಿತು,
	ಇನ್ನೆಂದಿಗೆ ಮೋಕ್ಶವಹುದೋ ಕೂಡಲಸಂಗಮದೇವಾ

೧೦.	ಇಲಿ ಗಡಹನೊಡ್ಡಿದಲ್ಲಿರ್ಪಂತೆ ಎನ್ನ ಸಂಸಾರ ತನು ಕೆಡುವನ್ನಕ್ಕ ಮಾಣದು;
	ಹೆರರ ಬಾಧಿಸುವುದು ತನು ಕೆಡುವನ್ನಕ್ಕಮಾಣದು.
	ಹೆರರ ಚ್ಹಿದ್ರಿಸುವುದು ತನು ಕೆಡುವನ್ನಕ್ಕ ಮಾಣದು
	ಅಕಟಕಟಾ! ಸಂಸಾರಕ್ಕಾಸತ್ತೆ ಕೂಡಲಸಂಗಮದೇವಾ.

೧೧.	ಕಪ್ಪೆ ಸರ್ಪನ ನೆಳಲಲ್ಲಿಪ್ಪಂತೆನಗಾಯಿತ್ತಯ್ಯಾ!
	ಅಕಟಕಟಾ ಸಂಸಾರ ವೃಥಾ ಹೋಯಿತಲ್ಲಾ!
	ಕರ್ತುವೇ ಕೂಡಲಸಂಗಮದೇವಾ
	ಇವ ತಪ್ಪಿಸಿ ಎನ್ನನು ರಕ್ಶಿಸಯ್ಯಾ.

೧೨.	ಶೂಲದ ಮೇಲಣ ವಿಭೋಗವೇನಾದೊಡೇನೋ?
	ನಾನಾವರ್ಣದ ಸಂಸಾರ ಹಾವ-ಹಾವಡಿಗನ ಸ್ನೇಹದಂತೆ!
	ತನ್ನಾತ್ಮ ತನಗೆ ಹಗೆಯಾದ ಬಳಿಕ ಬಿನ್ನಾಣವುಂಟೆ!
	ಮಹಾದಾನಿ ಕೂಡಲಸಂಗಮದೇವಾ.

೧೩.	ಸಂಸಾರವೆಂಬ ಬಲೆಯಲ್ಲಿ ಸಿಲುಕಿದೆನಯ್ಯಾ,
	ಎನ್ನನು ಕಾಯಯ್ಯಾ ಸಂಗಮದೇವಾ ಹುರುಳಿಲ್ಲ ಹುರುಳಿಲ್ಲ!
	ಶಿವಧೋ! ಶಿವಧೋ!

೧೪.	ನಾನೊಂದು ನೆನೆದೊಡೆ ತಾನೊಂದು ನೆನೆವುದು,
	ನಾವಿತ್ತಲೆಳೆ ದೊಡೆ ತಾನತ್ತಲೆಳೆವುದು;
	ತಾ ಬೇರೆಯೆನ್ನನಳಲಿಸಿ ಕಾಡಿತ್ತು.
	ತಾ ಬೇರೆಯೆನ್ನ ಬಳಲಿಸಿ ಕಾಡಿತ್ತು.
	ಕೂಡಲಸಂಗನ ಕೂಡಿಹೆನೆಂದೊಡೆ ತಾನೆನ್ನ ಮುಂದುಗೆಡಿಸಿತ್ತು ಮಾಯೆ!

೧೫.	ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ!
	ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ!
	ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ!
	ಇದಾವ ಪರಿಯಲ್ಲಿ ಕಾಡಿತ್ತು ಮಾಯೆ
	ಈ ಮಾಯೆಯ ಕಳೆವೊಡೆ ಯೆನ್ನಳವಲ್ಲ,
	ನೀವೇ ಬಲ್ಲಿರಿ ಕೂಡಲಸಂಗಮದೇವಾ.

೧೬.	ಕೊಡೆವಿಡಿದು ಕುದುರೆಯ ದೃಢವುಳ್ಳ ರಾವುತನೇರಿ ಕೊಡೆ
	ಕೋಟಿ, ಶೂರರು, ಹನ್ನಿಬ್ಬರಯ್ಯಾ! ಚ.ದ್ರಕಾಂತ ಗಿರಿಯ
	ಗಜ ಬಂದು ಮೂದಲಿಸಿ ಅರಿದು ಕೊಲುವೊಡೆ ರಿಪುಗಳ ಕಲಿತನವನೋಡಾ!
	ಅವಿಗೆಯೊಳಡಗಿದ ಪುತ್ಥಳಿಯ ರೂಹಿನಂತಾಯಿತ್ತು,
	ಕೂಡಲಸಂಗಮದೇವಾ ನಿಮ್ಮ ಹೆಸರಿಲ್ಲದ ಹೆಸರು.

೧೭.	ಇಂದಿಗೆಂತು ನಾಳಿಗೆಂತು ಎಂದು ಬೆಂದೊಡಲ ಹೊರೆಯ
	ಹೋಯಿತ್ತೆನ್ನ ಸಂಸಾರ! ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ
	ಹೇಯವಿಲ್ಲಾ; ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲಾ!
	ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ
	ಕೊಂದುದಯ್ಯಾ ಈ ಮಾಯೆ ಕೂಡಲಸಂಗಮದೇವಾ.

೧೮.	ದಿಟ ಪುಟ ಭಕುತಿ ಸಂಪುಟ ನೆಲೆಗೊಳ್ಳದಾಗಿ
	ಟಿಂಬಕನನಾಡಿಸುತ್ತಿದ್ದಿತಯ್ಯಾ ನಿನ್ನ ಮಾಯೆ;
	ಟೀಕವ ಟಿಂಬಕನಾಡಿಸುತ್ತಿದ್ದಿತಯ್ಯಾ ನಿನ್ನ ಮಾಯೆ;
	ಕೂಡಲಸಂಗಮದೇವಯ್ಯಾ, ಹೊನ್ನ ಹೆಣ್ಣ ಮಣ್ಣ ತೋರಿ.
- - - - - - - - - -

ಲಿಂಗಧಾರಣ ಸ್ಥಲ

೧.	ಪಾತಕ ಶತಕೋಟಿಯನೊರಸಲು ಸಾಲದೆ ಒಂದು ಶಿವನ ನಾಮ ?
	ಸಾಲದೆ ಒಂದು ಹರನ ನಾಮ ?
	ಕೂಡಲ ಸಂಗಮದೇವಾ, ನಿಮ್ಮ ಉಂಡಿಗೆಯ ಪಶುವ ಮಾಡಿಧೆಯಾಗಿ.

೨.	ಲಿಂಗದ ಉಂಡಿಗೆಯ ಪಶುವಾನನಯ್ಯ ವೇಶ್ಹಧಾರಿಯಾನು,
	ಉದರ ಪೋಶ್ಹಕನಾನಯ್ಯ.
	ಕೂಡಲ ಸಂಗನ ಶರಣರ ಧರ್ಮದ ಕವಿಲೆಯಾನು.

೩.	ನಮಃ ಶಿವಾಯ, ನಮಃ ಶಿವಾಯ, ನಮಃ ಶಿವಾಯ ಶರಣೆಂದಿತ್ತು ;
	ಲಲಾಟಲಿಖಿತ ಬರೆದಬಳಿಕ ಪಲ್ಲಟವ ಮಾಡ ಬಾರದು.
	ಎನ್ನ ಉರದ ಉಂಡೆಗೆ ; ಸಿರಿದ ಅಕ್ಶರ ಕೂಡಲ ಸಂಗಯ್ಯ ಶರಣೆಂದಿತ್ತು.

೪.	ಅಡ್ಡ ವಿಭೂತಿಯಿಲ್ಲದವರ ಮುಖ ಹೊಲ್ಲ, ನೋಡಲಾಗದು 
	ಲಿಂಗ ದೇವರಿಲ್ಲದ ಠಾವು ನರವಿಂಧ್ಯ, ಹೋಗಲಾಗದು 
	ದೇವಭಕ್ತರಿಲ್ಲದೂರುಸಿನೆ, ಹಾಳು
	ಕೂಡಲ ಸಂಗಮದೇವಾ.

೫.	ಅಡ್ಡ ತ್ರಿಪುಣ್ಡ್ರದ ಮಣಿ ಮುಕುಟದ ವೇಶ್ಹದ 
	ಶರಣರ ಕಂಡರೆ ನಂಬುವದೆನ್ನ ಮನವು ,
	ನೆಚ್ಚುವುದೆನ್ನ ಮನವು ಸಂದೇಹವಿಲ್ಲದೆ ;
	ಇವಿಲ್ಲವರ ನಂಬೆ ಕೂಡಲ ಸಂಗಮದೇವಾ.

೬.	ಆರಾಧ್ಯ ಪ್ರಾಣಲಿಂಗವೆಂದರಿದು ಪೂರ್ವಗುಣವಳಿದು
	ಪುನರ್ಚಾತಕನಾದ ಬಳಿಕ ಸಂಸಾರ ಬಂಧುಗಳೆನ್ನರೆಂದೊಡೆ
	ನಂಟ ಭಕ್ತಿನಾಯಕ ನರಕ ಇಂತೆಂದುದು ಕೂಡಲ ಸಂಗನ ವಚನ.

೭.	ತಾಳಮರದ ಕೆಳಗೆ ಒಂದು ಹಾಲ ಹರವಿಯಿರ್ದೊಡೆ ಅದು ಹಾಲಹರವಿಯಿನ್ನರು,
	ಸುರೆಯ ಹರವಿಯಂಬರು ಈ ಭಾವನಿಂದೆಯ ಮಾಣಿಸಾ, ಕೂಡಲ ಸಂಗಮ ದೇವಾ.

೮.	ಸುಪಥ ಮಂತ್ರದುಪದೇಶವ ಕಲಿತು ಯುಕ್ತಿಗೆಟ್ಟು ನಡೆವಿರಯ್ಯ
	ತತ್ವಮಸಿ ಎಂಬುದನರಿದು ಕತ್ತಲೆದೊಡವಿರಯ್ಯ 
	ವೇದವಿಪ್ರರ ವಿಚಾರಿಸಿ ನೋಡಲು ’ಉಪದೇಶ ಪರೀಕ್ಶೆ ನಾಯಕ ನರಕ’ 
	ಎಂಬುದು ಕೂಡಲ ಸಂಗನ ವಚನದ ಸೂಚನೆ.

೯.	ಕುಂಬಳಕಾಯಿಗೆ ಕುಬ್ಬುನದ ಕಟ್ಟಕೊಟ್ಟರೆ ಕೊಳೆವುದಲ್ಲದೇ ಬಲಹಾಗ ಬಲ್ಲುದೇ ?
	ಅಳಿಮನದವಂಗೆ ಶಿವದೀಕ್ಶೆಯ ಕೊಟ್ಟರೆ ಭಕ್ತಿ ಎಂತಹದೊ ?...
	ಮುನ್ನಿನಂತೆ ಕೂಡಲ ಸಂಗಯ್ಯ ; ಮನಹೀನನ ಮೀಸಲ ಕಾಯ್ದಿರಿಸಿದಂತೇ.

೧೦.	ಸಗಣೆಯ ಬೆನಕಂಗೆ ಸಂಪಿಗೆಯರಳಲ್ಲಿ ಪೂಜಿಸಿದರೆ,
	ರಂಜನೆಯಲ್ಲದೆ ಅದರ ಗುಂಜಳ ಬಿಡದಣ್ಣಾ !
	ಮಣ್ಣ ಪುತ್ಥಳಿಯ ಮಾಣದೆ ಜಲದಲ್ಲಿ ತೊಳೆದರೆ
	ನಿಚ್ಚ ನಿಚ್ಚಕ್ಕೆ ಕೆಸರಹುದಲ್ಲದೆ ಅದರಚ್ಚುಗ ಬಿಡದಣ್ಣಾ !
	ಲೋಕದ ಮಾನವಂಗೆ ಶಿವದೀಕ್ಶೆಯ ಕೊಟ್ಟರೆ
	ಕೆಟ್ಟವನೇಕೆ ಶಿವಭಕ್ತನಹನು ಕೂಡಲ ಸಂಗಮದೇವಾ ?
- - - - - - - - - -

This is contribution of K Sree Hari. Please Send your corrections

Back to basavaNNanavara vachanagaLu - Romanized Text
Back to Vachana Sahitya Page
Back to vIrashaiva Home Page
Back to shaivism page